ಅಮೆರಿಕದ ರಿಪಬ್ಲಿಕನ್ ಪಕ್ಷ

	ಅಮೆರಿಕದ ಸಂಯುಕ್ತ ಸಂಸ್ಥಾನದ ಮುಖ್ಯ ರಾಜಕೀಯ ಪಕ್ಷಗಳಲ್ಲಿ ಒಂದು ಥಾಮಸ್ ಜೆಫರ್‍ಸನ್ ಸ್ಥಾಪಿಸಿದ ಡೆಮೊಕ್ರೆಟಿಕ್ ಪಕ್ಷಕ್ಕೆ ರಿಪಬ್ಲಿಕನ್ ಪಕ್ಷವೆಂದು ಎರಡನೆಯ ಹೆಸರಿತ್ತು. ಜಾನ್ ಕ್ವಿನ್ಸಿ ಆಡಮ್ಸ್ ಮತ್ತು ಹೆನ್ರಿಕ್ಲೇ ಮುಂತಾದವರು (1828)ರಲ್ಲಿ ಈ ಪಕ್ಷದಿಂದ ಬೇರೆಯಾಗಿ ತಮ್ಮದೇ ಆದ ನ್ಯಾಷನಲ್ ರಿಪಬ್ಲಿಕನ್ ಪಕ್ಷವನ್ನು ಸ್ಥಾಪಿಸಿದರು. ಗುಲಾಮಗಿರಿ ಪದ್ಧತಿಯನ್ನು ವಿರೋಧಿಸುತ್ತಿದ್ದ ನ್ಯಾಷನಲ್ ರಿಪಬ್ಲಿಕನ್ನರೂ ಡೆಮೊಕ್ರೆಟಿಕ್ ಪಕ್ಷದವರೂ ಮತ್ತು ಸ್ವತಂತ್ರರೂ ಸೇರಿ (1854)ರಲ್ಲಿ ಈಗಿನ ರಿಪಬ್ಲಿಕನ್ ಪಕ್ಷವನ್ನು ಸ್ಥಾಪಿಸಿದರು. ಫಿಲಿಡೆಲ್ಫಿಯದಲ್ಲಿ ಈ ಸಭೆಯ ಅಧಿವೇಶನ (1856)ರಲ್ಲಿ ನಡೆಯಿತು. ಈ ಪಕ್ಷದ ಪರವಾಗಿ ಸ್ಪರ್ಧಿಸಿದ ಏಬ್ರಹಾಂ ಲಿಂಕನ್ನರು (1860)ರಲ್ಲಿ ಅಮೆರಿಕದ ಅಧ್ಯಕ್ಷನಾಗಿ ಚುನಾಯಿತನಾದ. ಅಮೆರಿಕದ ಅಂತರ್ಯುದ್ಧದ ತರುವಾಯ ಈ ಪಕ್ಷ ಪ್ರಬಲಪಕ್ಷವಾಗಿ ಅಧ್ಯಕ್ಷಸ್ಥಾನ ಮತ್ತು ಕಾಂಗ್ರೆಸ್ ಸಭೆಯನ್ನು (1874)ರವರೆಗೆ ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು. ಪ್ರತಿನಿಧಿಗಳ ಸಭೆಯಲ್ಲಿ ಡೆಮೊಕ್ರೆಟಿಕ್ ಪಕ್ಷ ಪ್ರಬಲವಾಗಿತ್ತು. (1884)ರಲ್ಲಿ ಕ್ಲೀವ್‍ಲ್ಯಾಂಡ್ ಅಧ್ಯಕ್ಷನಾಗಿ ಚುನಾಯಿತನಾಗುವವರೆಗೂ ಅಧ್ಯಕ್ಷಸ್ಥಾನ ರಿಪಬ್ಲಿಕನ್ ಪಕ್ಷದ ಅಧೀನದಲ್ಲೇ ಇತ್ತು.

	(1888-1892)ರವರೆಗೂ ಪುನಃ (1896)ರಲ್ಲೂ ಕಾಂಗ್ರೆಸ್ ಸಭೆ ಮತ್ತು ಅಧ್ಯಕ್ಷಸ್ಥಾನ-ಇವೆರಡೂ ಈ ಪಕ್ಷದ ಅಧೀನದಲ್ಲಿದ್ದುವು. (1912)ರಲ್ಲಿ ರಿಪಬ್ಲಿಕನ್ ಪಕ್ಷದಲ್ಲೇ ಒಡಕು ಹುಟ್ಟಿ ಅಧ್ಯಕ್ಷ ಪದವಿ ಅವರ ಕೈ ಬಿಟ್ಟಿತು. ವುಡ್ರೊ ವಿಲ್ಸನ್ ಅಧ್ಯಕ್ಷನಾಗಿ ಡೆಮೊಕ್ರೆಟಿಕ್ ಪಕ್ಷ ಪುನಃ ಅಧಿಕಾರಕ್ಕೆ ಬಂತು. ಆದರೆ ಅಧ್ಯಕ್ಷನ ಅನೇಕ ಯೋಜನೆಗಳಿಗೆ ಕಾಂಗ್ರೆಸ್ಸಿನಲ್ಲಿ ಬಹುಮತ ಹೊಂದಿದ್ದ ರಿಪಬ್ಲಿಕನ್ ಪಕ್ಷ ತಡೆ ಉಂಟುಮಾಡಿತು. (1920)ರಲ್ಲಿ ಅಧ್ಯಕ್ಷಸ್ಥಾನವೂ ಈ ಪಕ್ಷದ ಅಧೀನವಾಗಿ, ಇದರ ಆಡಳಿತ (1932)ರವರೆಗೆ ಮುಂದುವರಿಯಿತು. (1932), (1936), (1940), (1944)ರಲ್ಲಿ ಡೆಮೊಕ್ರೆಟಿಕ್ ಪಕ್ಷದವರು ಅಧ್ಯಕ್ಷರಾಗಿ ಚುನಾಯಿತರಾದರು.

	(1948)ರಲ್ಲಿ ಈ ಪಕ್ಷದ ಹ್ಯಾರಿ ಟ್ರೂಮನ್ ಅಧ್ಯಕ್ಷನಾದ. (1952)ರಲ್ಲಿ ಡ್ವೈಟ್ ಡಬ್ಲ್ಯು. ಐಸೆûನ್ ಹೋವರ್ ಅಧ್ಯಕ್ಷನಾದಾಗ ರಿಪಬ್ಲಿಕನ್ ಪಕ್ಷ ಪುನಃ ಅಧಿಕಾರಕ್ಕೆ ಬಂತು. (1956)ರಲ್ಲಿ ಐಸೆûನ್‍ಹೋವರ್ ಎರಡನೆಯ ಬಾರಿ ಅಧ್ಯಕ್ಷನಾದ.

	ಅಂತರ್ಯುದ್ಧಾನಂತರ ಒಕ್ಕೂಟವನ್ನು ಉಳಿಸಿದ ಪಕ್ಷವೆಂದು ಹೆಸರನ್ನು ಗಳಿಸಿ ಈ ಪಕ್ಷ ಅಪಾರ ಜನಮನ್ನಣೆ ಪಡೆಯಿತು. ಕೇಂದ್ರಸರ್ಕಾರದ ಅಧಿಕಾರ ಹೆಚ್ಚಬೇಕೆಂಬ ಅಭಿಪ್ರಾಯವನ್ನು ಹೊಂದಿತ್ತು. ಫ್ರಾಂಕ್ಲಿನ್ ರೂಸ್ûವೆಲ್ಟ್‍ನ ನ್ಯೂಡೀಲ್ ನೀತಿ ಕಾರ್ಯಗತವಾದ ತರುವಾಯ, ಕೇಂದ್ರಸರ್ಕಾರದ ಅಧಿಕಾರ ಹೆಚ್ಚಾಗುವುದನ್ನು ವಿರೋಧಿಸುವ ಪಕ್ಷವಾಯಿತು. ಪ್ರಥಮಮಹಾಯುದ್ಧದ ಅನಂತರ, ಅಮೆರಿಕ ಲೀಗ್ ಸಂಸ್ಥೆಯನ್ನು ಸೇರುವುದನ್ನು ವಿರೋಧಿಸಿತು.

	ದೇಶದ ಇವೆರಡು ಪ್ರಮುಖ ಪಕ್ಷಗಳಲ್ಲಿ ಖಚಿತವಾದ ವ್ಯತ್ಯಾಸಗಳಿಲ್ಲ. ವಿಶ್ವದಲ್ಲಿ ಕಮ್ಯುನಿಸ್ಟರ ಪ್ರಭಾವವನ್ನು ತಡೆಗಟ್ಟುವುದು, ಅಂತರರಾಷ್ಟ್ರೀಯ ವಿಷಯಗಳಲ್ಲಿ ಅಮೆರಿಕ ಪ್ರಮುಖಪಾತ್ರ ವಹಿಸುವುದು, ಮುಂತಾದ ವಿಷಯಗಳನ್ನು ಕುರಿತು ಎರಡು ಪಕ್ಷಗಳ ಧೋರಣೆಗಳಲ್ಲಿ ವ್ಯತ್ಯಾಸವಿಲ್ಲ. ಹಣಕಾಸಿನ ಮತ್ತು ತೆರಿಗೆ ನೀತಿಗಳಲ್ಲಿ ಮಾತ್ರ ಕೆಲವು ವ್ಯತ್ಯಾಸಗಳನ್ನು ಕಾಣಬಹುದು. ಕೈಗಾರಿಕೋದ್ಯಮಿಗಳ ಬೆಂಬಲ ರಿಪಬ್ಲಿಕನ್ನರಿಗೂ ಕಾರ್ಮಿಕರ ಬೆಂಬಲ ಡೆಮೊಕ್ರ್ಯಾಟರಿಗೂ ಹೆಚ್ಚಾಗಿದೆ.
(ನೋಡಿ- ಅಮೆರಿಕದ-ಡೆಮೊಕ್ರೆಟಿಕ್-ಪಕ್ಷ)							  
  
(ಎ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ